ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು
ಅತ್ತಿಮಬ್ಬೆ, ದಾನಚಿಂತಾಮಣಿ

ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ 'ಅಜಿತಪುರಾಣ'ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪ್ರಾಯಶಃ ರನ್ನನಿಂದಲೇ ಬರೆಯಲ್ಪಟ್ಟ, ಗದಗು ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿರುವ ಒಂದು ಶಾಸನದಲ್ಲಿ ಮತ್ತು ಪೊನ್ನನ 'ಶಾಂತಿಪುರಾಣ'ದಲ್ಲಿ ಅತ್ತಿಮಬ್ಬೆಯನ್ನು ಕುರಿತ ಮಾಹಿತಿಗಳು ದೊರಕಿವೆ.

 

ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಅವಳ ಪೂರ್ವಜರು, ಈಗ ಆಂಧ್ರಪ್ರದೇಶದಲ್ಲಿರುವ ವೆಂಗಿಮಂಡಲದ ಪುಂಗನೂರು ಪ್ರದೇಶದಿಂದ ಬಂದವರು. ಮಲ್ಲಪ್ಪಯ್ಯ ಮತ್ತು ಅಪ್ಪಕಬ್ಬೆ ಅವಳ ತಾಯಿ-ತಂದೆಯರು. ಅವಳ ತಂದೆಯು ಕಲೆ ಮತ್ತು ಸಾಹಿತ್ಯಗಳ ದೊಡ್ಡ ಪೋಷಕನಾಗಿದ್ದನು. ಪೊನ್ನನು ಅವನ ಆಶ್ರಿತನಾಗಿದ್ದವನು. ಚಾಲುಕ್ಯ ಚಕ್ರವರ್ತಿಯಾದ ಆಹವಮಲ್ಲ ಸೋಮೇಶ್ವರನ ಸಮರ್ಥ ಸೇನಾನಿಯಾಗಿದ್ದ ನಾಗದೇವನು ಅತ್ತಿಮಬ್ಬೆಯ ಪತಿ.ಅತ್ತಿಮಬ್ಬೆಯ ಸೋದರಿಯಾದ ಗುಂಡಮಬ್ಬೆಯೂ ಅವನ ಪತ್ನಿಯಾಗಿದ್ದಳು. ಅಣ್ಣಿಗದೇವನು ಅತ್ತಿಮಬ್ಬೆಯ ಮಗ. ನಾಗದೇವನ ಆಕಾಲಮರಣದ ನಂತರ ಗುಂಡಮಬ್ಬೆಯು ಸಹಗಮನ ಮಾಡಿದಳು. ತನ್ನ ಪತಿ ಮತ್ತು ಸೋದರಿಯರನ್ನು ಕಳೆದುಕೊಂಡ ವಿಷಾದದಲ್ಲಿ ಮುಳುಗಿದ ಅತ್ತಿಮಬ್ಬೆಯು ದುಃಖವನ್ನು ನುಂಗಿಕೊಂಡು ಧಾರ್ಮಿಕವಾದ ಸರಳ ಜೀವನವನ್ನು ನಡೆಸಿದಳು. ಅವಳ ಜೀವನವು ಕಲೆಗಳು ಮತ್ತು ಧರ್ಮದ ಪುನರುಜ್ಜೀವನಕ್ಕೆ ಮೀಸಲಾಯಿತು. ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು 'ದಾನಚಿಂತಾಮಣಿ' ಎಂಬ ಬಿರುದನ್ನು ಪಡೆದಳು.

 

ಅತ್ತಿಮಬ್ಬೆಯು ಲಕ್ಕುಂಡಿಯಲ್ಲಿ ಒಂದು ವಿಶಾಲವಾದ ಜೈನ ಬಸದಿಯನ್ನು ನಿರ್ಮಿಸಿದಳು. (ಕ್ರಿ.ಶ. 1007) ಆ ದೇವಾಲಯದ ನಿರ್ವಹಣೆಗೆ ಅಗತ್ಯವಾದ ದಾನ-ದತ್ತಿಗಳನ್ನೂ ಅವಳೇ ನೀಡಿದಳು. 1500 ರತ್ನಖಚಿತವಾದ ಬಂಗಾರದ ಜಿನಬಿಂಬಗಳನ್ನು ಮಾಡಿಸಿ ಭಕ್ತರಿಗೆ ದಾನವಾಗಿ ನೀಡಿದಳು. ಪೊನ್ನನ 'ಶಾಂತಿಪುರಾಣ'ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು.

ಅವಳ ಮರಣದ ನಂತರ ಸ್ಥಾಪಿತವಾದ ಅನೇಕ ಶಾಸನಗಳು ಮತ್ತು ನಂತರದ ಪೀಳಿಗೆಗಳ ಹಲವು ಕವಿಗಳು ಅವಳ ಹಿರಿಮೆಯನ್ನು ಹೊಗಳಿದ್ದಾರೆ. ಆದರೆ, ರನ್ನನು ರಚಿಸಿರುವ ಪದ್ಯಗಳು ತಮ್ಮ ಸಾಹಿತ್ಯಕ ಗುಣಕ್ಕಾಗಿಯೂ ಸ್ಮರಣೀಯವಾಗಿವೆ. ಅವನು ಅವಳ ಪಾವಿತ್ರ್ಯವನ್ನು ಗಂಗಾನದಿಯ ನೀರಿಗೆ, ಬಿಳಿಯ ಆರಳೆಗೆ ಮತ್ತು ಕೊಪ್ಪಳನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೆ ಹೋಲಿಸಿದ್ದಾನೆ.

 

ಮುಂದಿನ ಓದು:

  1. 'ಅತ್ತಿಮಬ್ಬೆ' (ಕಾದಂಬರಿ), ಸಮೇತನಹಳ್ಳಿ ರಾಮರಾಯ, 2004, ಕನ್ನಡ ಸಾಹಿತ್ಯಪರಿಷತ್ತು, ಬೆಂಗಳೂರು
  2. ''ದಾನಚಿಂತಾಮಣಿ ಅತ್ತಿಮಬ್ಬೆ' (ಜೀವನಚರಿತ್ರೆ), ಹಂಪ. ನಾಗರಾಜಯ್ಯ
  3. 'ದಾನಚಿಂತಾಮಣಿ ಅತ್ತಿಮಬ್ಬೆ', ಎಸ್.ಪಿ.ಪಾಟೀಲ ಮತ್ತು ಪ್ರಶಾಂತಕುಮಾರ ನಾಲ್ವಾರ, ಪ್ರ.: ಜಯಪದ್ಮ ಚಂದ್ರಕೀರ್ತಿ, ಮೈಸೂರು. (ಹಂಪನಾ ಅವರ ಕೃತಿಯ ಮರಾಠೀ ಅನುವಾದ)

ಮುಖಪುಟ / ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು